ಅಕ್ಷತಾ ಹುಂಚದಕಟ್ಟೆ

ಅಕ್ಷತಾ ಹುಂಚದಕಟ್ಟೆ ಕನ್ನಡ ಭಾಷೆಯ ಕವಯತ್ರಿ, ವಿಮರ್ಶಕಿ, ಸಂಪಾದಕಿ ಮತ್ತು ಪ್ರಕಾಶಕಿ. ಅಕ್ಷತಾ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯಲ್ಲಿ. ಅವರ ತಂದೆ ಕೃಷ್ಣಮೂರ್ತಿ ಮತ್ತು ತಾಯಿ ಶೈಲಾ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದರು.

ಹಲವಾರು ಕವನಸಂಕಲನಗಳು, ಪ್ರಬಂಧ ಲೇಖನಗಳನ್ನು ಪ್ರಕಟಿಸಿರುವ ಅಕ್ಷತಾ, ತಾವೇ ಆರಂಭಿಸಿದ ‘ಅಹರ್ನಿಶಿ ಪ್ರಕಾಶನ’ದ ಮೂಲಕ ನೂರಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕಡಿದಾಳು ಶಾಮಣ್ಣನವರ ಆತ್ಮಕಥನ ಕಾಡುತೊರೆಯ ಜಾಡು, ಪುರುಷೋತ್ತಮ ಬಿಳಿಮಲೆಯವರ ಕಾಗೆ ಮುಟ್ಟಿದ ನೀರು, ನೀರ ಮೇಲಣ ಚಿತ್ರ, ಗಾಯಗೊಂಡವರಿಗೆ, ರಸ್ತೆ ನಕ್ಷತ್ರ ಸೇರಿದಂತೆ ಹಲವು ಕೃತಿಗಳು ಪ್ರಶಸ್ತಿ ಪಡೆದಿವೆ. ಸಾಂಸ್ಕೃತಿಕ ವಲಯದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಪ್ರಕಾಶನ ಸಂಸ್ಥೆ ಇದು.

‘ಅಕ್ಷತಾ ಕೆ’ ಎಂಬ ಹೆಸರಿನಲ್ಲಿ “ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ” ಎಂಬ ಮೊದಲ ಕವನಸಂಕಲನ ಪ್ರಕಟವಾಯಿತು. ನಂತರ ಅಕ್ಷತಾ ಹುಂಚದಕಟ್ಟೆ ಎಂದೇ ಗುರುತಿಸಿಕೊಂಡ ಅವರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಕಡಿದಾಳು ಶಾಮಣ್ಣ ಅವರ ಆತ್ಮಕಥೆ ‘ಕಾಡುತೊರೆಯ ಜಾಡು’ ಕೃತಿಯ ನಿರೂಪಣೆಗಾಗಿ ಅಕ್ಷತಾ ಅವರಿಗೆ ೨೦೧೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ.

error: Content is protected !!